ನಳಕಯಂತ್ರ -
ಪ್ರಾಚೀನ ಗ್ರಹವೇಧಯಂತ್ರಗಳ ಪೈಕಿ ಒಂದು. ಸುಮಾರು 24" ಪ್ರಮಾಣದ ಬಿದಿರು ಕೊಳವೆಯಲ್ಲಿ ಒಂದು ಅಂಗುಲ ಅಂತರದ ರಂಧ್ರಕ್ಕೆ ಜೇಡನ ಪೊರೆಯನ್ನು ಅಂಟಿಸಿ, ಆ ಕೊಳವೆಯ ಮೂಲಕ ಗ್ರಹಸ್ಥಾನ, ಗ್ರಹಗಳ ವಕ್ರ ಋಜುಗತಿ ಕ್ರಮಗಳನ್ನೂ ಸೂರ್ಯ ಚಂದ್ರ ಗ್ರಹಣಗಳ ಉನ್ಮೀಲನ ನಿಮೀಲನ ಕಾಲಗಳನ್ನೂ ಪ್ರಮಾಣಗಳನ್ನೂ ಗುರ್ತಿಸುತ್ತಿದ್ದರು. ಈ ಯಂತ್ರದ ಹೆಸರು ಭಾಸ್ಕರಾಚಾರ್ಯಕೃತ ಗೋಳಾಧ್ಯಾಯ ಎಂಬ ಪುಸ್ತಕದಲ್ಲಿಯೂ ಖಗೋಳಶಾಸ್ತ್ರ ಗ್ರಂಥಗಳಲ್ಲಿಯೂ ದೊರೆಯುತ್ತದೆ. ಇದಲ್ಲದೆ, ಯಷ್ಟಿ, ಶಂಕು, ಘಟೀ ಚಕ್ರ ಚಾಪ, ತುಯ-ಯಂತ್ರ, ರಜ್ಜು ಮುಂತಾದ ಬೇರೆ ಬೇರೆ ಯಂತ್ರದ ಹೆಸರುಗಳು ಕೂಡ ಉಕ್ತವಾಗಿವೆ. ಅವುಗಳಿಂದ ದೇಶದ ಅಕ್ಷಾಂಶ, ರೇಖಾಂಶಗಳನ್ನು ಪತ್ತೆ ಹಚ್ಚುತ್ತಿದ್ದರು.				
(ಎಚ್.ಜಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ